ವಿರೂಪಾಕ್ಷ 2

	ವಿಜಯನಗರ ಸಂಗಮ ವಂಶದ ದೊರೆ (1404-06). ಎರಡನೆಯ ಹರಿಹರ ಮತ್ತು ಅವರ ರಾಣಿಯರ ಲ್ಲೊಬ್ಬಳಾದ ಮಲ್ಲಾ (ಮೇಲಾ) ದೇವಿಯ ಮಗ. ಪ್ರಾಪ್ತವಯಸ್ಕನಾದ ತರುವಾಯ ಈತ ತನ್ನ ತಂದೆಯ ಆಡಳಿತದಲ್ಲಿ ತನ್ನ ಸಹೋದರನಾದ ಒಂದನೆಯ ದೇವರಾಯ ಮತ್ತು ಮಲಸಹೋದರ ಎರಡನೆಯ ಬುಕ್ಕನೊಡನೆ ಪಾಲ್ಗೊಂಡಿದ್ದ ಈತ, ಸಿಂಹಳ ದ್ವೀಪದ ಮೇಲೆ ದಂಡೆತ್ತಿ ಹೋಗಿ ಅಲ್ಲಿಯ ರಾಜನನ್ನು ಸೋಲಿಸಿ, ಅವನು ವಿಜಯನಗರಕ್ಕೆ ಪೊಗದಿ ಸಲ್ಲಿಸುವಂತೆ ಮಾಡಿದ. 1404ರಲ್ಲಿ ಎರಡನೆಯ ಹರಿಹರನ ಮರಣಾನಂತರ, ಅವನ ಮಕ್ಕಳಲ್ಲಿ ಸಿಂಹಾಸನಕ್ಕಾಗಿ ಕಾದಾಟಗಳು ನಡೆದಾಗ ಎರಡನೆಯ ಬುಕ್ಕನನ್ನು ಸೋಲಿಸಿ ವಿರೂಪಾಕ್ಷ ಸಿಂಹಾಸನವನ್ನು ಪಡೆದ. ಆದರೆ ಬಹಳ ಕಾಲ ರಾಜನಾಗಿರಲು ಸಾಧ್ಯವಾಗಲಿಲ್ಲ. ಈತನ ಸಹೋದರನೂ ಸಾಹಸಿಯೂ ಆದ ಒಂದನೆಯ ದೇವರಾಯ ಈತನನ್ನು ಸಿಂಹಾಸನದಿಂದ ತಳ್ಳಿ ಅಧಿಕಾರಾರೂಢನಾದ. ವಿರೂಪಾಕ್ಷ ಅನಂತರ ಪ್ರಾಂತಾಧಿಕಾರಿಯಾಗಿ ಮುಂದುವರಿದನೆಂದು ತಿಳಿದುಬರುತ್ತದೆ. 		
	(ಜಿ.ಆರ್.ಆರ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ